siriyannena bannipenu


ಬಿನ್ನಹ ಗುರುವೆ ಧ್ಯಾನಕೆ ಬೇಸರಾದಾಗ
ನಿನ್ನನಾದಿಯ ಮಾಡಿಕೊಂಡು
ಕನ್ನಡದೊಳಗೊಂದು ಕಥೆಯ ಪೇಳುವೆನದು
ನಿನ್ನಾಜ್ಞೆ ಕಂಡ ನನ್ನೊಡೆಯಾ

ಅಯ್ಯಯ್ಯ ಚೆನ್ನಾದುದೆನೆ ಕನ್ನಡಿಗರು
ರಯ್ಯಾ ಮಂಚಿದಿಯೆನೆ ತೆಲುಗ
ಅಯ್ಯಯ್ಯ ಎಂಚಪೊರ್ಲಾಂಡೆಂದು ತುಳುವರು
ಮೈಯುಬ್ಬಿ ಕೆಳಬೇಕಣ್ಣ

ಭರತಭೂತಳಕೆ ಸಿಂಗಾರವಾದಯೋಧ್ಯಾ
ಪುರದೊಳು ಮೂಲೋಕ ಪೊಗಳೆ
ಭರತಚಕ್ರೇಶ್ವರ ಸುಖಬಾಳುತಿರ್ದನಾ
ಸಿರಿಯನಿನ್ನೇನ ಬಣ್ಣಿಪೆನು

ಪುರುಪರಮೇಶನ ಹಿರಿಯ ಕುಮಾರನು
ನರಲೋಕಕೊಬ್ಬನೆ ರಾಯ
ಮುರಿದು ಕಣ್ಣಿಟ್ಟರೆ ಕ್ಷಣಕೆ ಮುಕ್ತಿಯ ಕಾಂಬ
ಭರತ ಚಕ್ರಿಯ ಹೇಳಲಳವೇ

ಆ ವಿಭುವೊಂದಿನದುದಯದೊಳೆದ್ದು
ದೇವತಾರ್ಚನೆಯನು ಮಾಡಿ
ಚಾವಡಿಗೈದಿ ತಾನೋಲಗವಾದೊಂದು
ಶ್ರೀ ವಿಲಾಸವನೇನನೆಂಬೆ

ನವರತ್ನ ಹೇಮನಿರ್ಮಿತವೆನಿಪಾಸ್ಥಾನ
ಭವನದೊಳಾ ರಾಜರತ್ನ
ಛವಿವಡೆದೆಸೆದನು ರತ್ನಪುಷ್ಪಕದೊಳು
ದಿವಿಜೇಂದ್ರನೊಪ್ಪುವಂದದೊಳು

ತರತರವಿಡಿದು ಢಾಳಿಸುತಿಹ ದೀರ್ಘ ಚಾ 
ಮರಗಳ ಸಾಲೊಳೆಸೆದನು
ಹರಿವ ಬೆಳ್ಮುಗಿಲೊಳು ತೋರಿ ಮರಸುವ ಚಂ
ದಿರನೋ ಭಾಸ್ಕರನೋಯೆಂಬಂತೆ

ಅಂಬುಜವೆಲ್ಲವು ರವಿಯ ನೋಳ್ಪಂತೆ ನೀ
ಲಾಂಬುಜ ನೋಳ್ಪಂತೆ ಶಶಿಯಾ
ತುಂಬಿದ ಸಭೆಯೆಲ್ಲ ನೃಪನ ನೋಡುವ ಮಿಕ್ಕ
ಹಂಬಲ ಮರೆದುದಲ್ಲಲ್ಲಿ

Comments

Post a Comment