paarivaala

ದಟ್ಟ ಕಾಡಿನಲೊಂದು ಹೆಮ್ಮರದ ಹೊದರಿನಲಿ
ಇರುತಿತ್ತು ಪುಟ್ಟ ಸಂಸಾರ ಹೂಡಿ
ಮುದ್ದು ಬಿಳಿ ಪಾರಿವಾಳಗಳ ಜೋಡಿ

ಹಗಲಿರುಳು ಜೊತೆಗೂಡಿ ಬಾಳಿದವು ಈ ಜೋಡಿ
ಎಂದಿಗೂ ಅಗಲಿರವು ಒಂದನೊಂದು
ಹಿಗ್ಗು ತುಂಬಿತು ಹೊದರಿನಲ್ಲಿ ಬಂದು

ಇಟ್ಟ ಮೊಟ್ಟೆಯನೊಡೆದು ಹಿಗ್ಗಿತಿವುಗಳ ಪ್ರೀತಿ
ಮುದ್ದು ಮರಿಗಳ ಮಧುರ ಸದ್ದು ಕೇಳಿ
ದಿನಕಳೆದವಾನಂದದಿಂದ ಬಾಳಿ

ಬೇಡನೊಬ್ಬನು ಬಂದು ಬಲೆಯ ಹರಡಿದನೊಮ್ಮೆ
ಪುಟ್ಟ ಮರಿಗಳು ಹಾರಿ ಸಿಲುಕಿ ಸೆರೆಗೆ
ಚೀತ್ಕರಿಸತೊಡಗಿದವು ಬರಲು ಹೊರಗೆ

ಕಂಡು ಪಾರಿವಾಳಗಳ ಪಾಡು ತಾಯಿ ಧುಮುಕಿತು ಬಲೆಗೆ
ಹೆಂಡತಿಯನಗಲಿರದ ಗಂಡು ಹಕ್ಕಿ
ಒಳಗೆ ಬಂದಿತು ಬಳಿಗೆ ಬಿಕ್ಕಿ ಬಿಕ್ಕಿ

ಕುರುಡು ವಾತ್ಸಲ್ಯದಲಿ ಕಳೆದುಕೊಂಡು ವಿವೇಕ
ಬಲೆಗೆ ನುಗ್ಗಿದ ಪಾರಿವಾಳ ಹಿಂಡು
ಹಸಿದ ಬೇಡನು ನಡೆದ ಹೊತ್ತುಕೊಂಡು

ಮೋಹ ಮುಸುಕಿದ ಬುದ್ಧಿ ಸರ್ವನಶದ ಸಿದ್ಧಿ
ವ್ಯಾಮೋಹವನು ತೊರೆದು ಬಾಳಬೇಕು
ಏನು ಬಂದರು ಕೂಡ ತಾಳಬೇಕು

Comments